ಗೋದಾನ -
ಗೋವನ್ನು ದಾನವಾಗಿ ಕೊಡುವ ಒಂದು ಕಟ್ಟಳೆ. ಇದು ವೇದಕಾಲದಿಂದ ಇಂದಿನವರೆಗೂ ನಡೆದು ಬಂದಿದೆ. ಗೋವು ಸಕಲ ದೇವತಾಮಯವೆಂದು ವೇದ ಪುರಾಣಾದಿಗಳು ಹೇಳುತ್ತವೆ. ಯಜ್ಞಾಂತ್ಯದಲ್ಲಿ ಋತ್ವಿಜರಿಗೆ ದಕ್ಷಿಣೆಯನ್ನು ಗೋದಾನ ರೂಪದಲ್ಲಿಯೇ ಕೊಡುವ ಪದ್ಧತಿಯಿತ್ತು. ಇಂಥಿಂಥ ಋತ್ವಿಜರಿಗೆ ಇಷ್ಟಿಷ್ಟು ಕೊಡಬೇಕೆಂದು ಯಜ್ಞಕ್ರಮ ಹೇಳುತ್ತದೆ. ಕಠೋಪನಿಷತ್ತಿನಲ್ಲಿ ಬರುವಂತೆ ನಚಿಕೇತ ತನ್ನ ತಂದೆ ಯಜ್ಞಾ ನಂತರ ಋತ್ವಿಜರಿಗೆ ಅಯೋಗ್ಯ ಗೋವುಗಳನ್ನು ಕೊಡುವುದನ್ನು ನೋಡಿ ಶ್ರದ್ಧಾಯುಕ್ತನಾಗಿ ತನ್ನನ್ನು ಯಾರಿಗೆ ಕೊಡುವೆಯೆಂದು ಆತನನ್ನು ಪ್ರಶ್ನಿಸಿದನೆಂದೂ ಆಗ ಅವನು `ಯಮನಿಗೆ ಎಂದು ಸಿಟ್ಟಿನಿಂದ ಹೇಳಿದನೆಂದೂ ಅನಂತರ ನಚಿಕೇತ ಯಮನಿಂದ ಆಧ್ಯಾತ್ಮಿಕ ಉಪದೇಶ ಪಡೆದನೆಂದೂ ಇದೆ. ಬೃಹದಾರಣ್ಯಕೋಪನಿಷತ್ತಿನಲ್ಲಿರುವಂತೆ ಜನಕ ಬ್ರಹಿಷ್ಠನಾದ ಯಾಜ್ಞವಲ್ಕ್ಯನಿಗೆ ವೇದಾಂತವಾದದಲ್ಲಿ ಜಯಿಸಿ ಪಡೆದ ಸಾವಿರಾರು ಗೋವುಗಳನ್ನು ಕೊಟ್ಟ. ಗ್ರಹಣ ಸಮಯದಲ್ಲಿಯೂ ಮರಣ ಸಮಯದಲ್ಲಿಯೂ ಕ್ಷೇತ್ರದಲ್ಲಿಯೂ ಗೋದಾನ ಮಾಡುವ ಪದ್ಧತಿ ಹೆಚ್ಚಾಗಿ ಇದೆ. ಮರಣಾನಂತರ ಮೃತನ ಸದ್ಗತಿಗಾಗಿ ಗೋದಾನ ಮಾಡುವ ಪರಂಪರೆಯನ್ನು ಇಂದಿಗೂ ಕಾಣಬಹುದು. ಗೋದಾನ ಅತಿಶಯ ಪುಣ್ಯಪ್ರದವಾದ ದಾನವೆಂದೂ ಶಾಸ್ತ್ರಗಳು ಸಾರುತ್ತವೆ. ಗೋವುಗಳನ್ನು ಸಂತುಷ್ಟಿಗೊಳಿಸಿದರೆ, ಸಕಲ ಪಾಪ ಶಮನವಾಗುವುದೆಂದೂ ದಾನಕೊಟ್ಟರೆ, ಸ್ವರ್ಗ ಸಮಾನವಾದ ಸಂಪತ್ತು ಇನ್ನೊಂದಿಲ್ಲದೆಂದೂ ಸ್ಕಾಂದಪುರಾಣದಲ್ಲಿ ಹೇಳಿದೆ. ಬಹಳ ಹಾಲನ್ನು ಹಿಂಡುವ ಒಳ್ಳೆಯ ನಡತೆಯ ಲಕ್ಷಣವಾದ ಗೋವನ್ನು ಕರುವಿನೊಂದಿಗೆ ದಾನ ಮಾಡಬೇಕೆಂದೂ ಸ್ಮøತಿಕಾರ ದೇವಲ ಹೇಳುತ್ತಾನೆ.

ಬ್ರಹ್ಮ ಪುರಾಣದಲ್ಲಿ - ತನ್ನ ಮೊಲೆಯ ಹಾಲನ್ನು ತಾನೇ ಕುಡಿಯುವ, ಹೆಚ್ಚು ಆಹಾರ ಸೇವಿಸುವ, ಬಾಲ್ಯಾವಸ್ಥೆಯಲ್ಲಿಯೇ ಗರ್ಭಧರಿಸಿದ ಗೋವನ್ನು ದಾನ ಮಾಡಬಾರದು ಎಂದಿದೆ. ಗೋದಾನ ಮಾಡಿದರೆ ಸ್ವರ್ಗ ಲಭಿಸುವುದೆಂದೂ ಹತ್ತು ಗೋದಾನ ಮಾಡಿದರೆ ಗೋಲೋಕ ಪ್ರಾಪ್ತಿಯೆಂದೂ ನೂರು ಗೋದಾನ ಮಾಡಿದರೆ ಬ್ರಹ್ಮಲೋಕ ಪ್ರಾಪ್ತಿಯೆಂದೂ ಸ್ಮøತಿಕಾರ ವಿಷ್ಣು ಹೇಳಿದ್ದಾನೆ. ಹೋಮಕ್ಕಾಗಿ ಅಗ್ನಿಹೋತ್ರಿಗೆ ಗೋವನ್ನು ಅವನು ಬೇಡದೇ ಕೊಟ್ಟದ್ದಾದರೆ ಸಕಲ ಭೂಮಂಡಲವನ್ನೇ ದಾನ ಮಾಡಿದ ಪುಣ್ಯ ಲಭಿಸುತ್ತದೆ ಎಂದು ಜಾಬಾಲನ ಅಭಿಪ್ರಾಯ. ಅಪಾತ್ರನಿಗೆ ಗೋದಾನ ಮಾಡಿದರೆ ಕೊಟ್ಟವನು ನರಕಕ್ಕೆ ಹೋಗುತ್ತಾನೆಂದು ನಂದಿ ಪುರಾಣದಲ್ಲಿರುವುದು ಗಮನಾರ್ಹವಾಗಿದೆ. ಹೀನಾಂಗದ, ದುಷ್ಟಸ್ವಭಾವದ ದುರ್ಬಲವಾದ, ಮುಪ್ಪಾದ, ವ್ಯಾಧಿ ಪೀಡಿತವಾದ ಹಣಸಲ್ಲಿಸದೇ ಕೊಂಡುಕೊಂಡ, ಕೃಶವಾದ, ದುಷ್ಟಕರುವುಳ್ಳ, ಬಂಜೆಯಾದ, ಅಧಿಕಾಂಗದ ಗೋವುಗಳನ್ನು ದಾನ ಮಾಡಬಾರದೆಂದು ಶಾಸ್ತ್ರೋಕ್ತಿ, ಹಾಗೂ ಇಂಥಿಂಥ ಬಣ್ಣದ ಗೋವನ್ನು ಇಂಥಿಂತ ರೀತಿಯಲ್ಲಿ ದಾನ ಮಾಡಬೇಕೆಂದೂ ಅದರಿಂದ ಈ ರೀತಿಯ ಫಲಪ್ರಾಪ್ತಿಯಾಗುತ್ತದೆಂದೂ ಸ್ಮøತಿಕಾರರು ಹೇಳೀದ್ದುಂಟು.

ಗೋದಾನ ಕ್ರಮ: ಮೊದಲು ಗ್ರಾಸಕೊಟ್ಟು ಗೋವನ್ನು ತೃಪ್ತಿಪಡಿಸಬೇಕು. ಅನಂತರ ಗೋವಿನ ಕೊಂಬಿಗೆ ಸುವರ್ಣದಿಂದಲೂ ಗೊರಸಿಗೆ ಬೆಳ್ಳಿಯಿಂದಲೂ ಅಲಂಕರಿಸಿ ಅದಕ್ಕೆ ರೇಷ್ಮೆ ವಸ್ತ್ರವನ್ನು ಹೊದಿಸಬೇಕು. ಅನಂತರ ಗಂಧಾಕ್ಷತಪುಷ್ಪಾದಿಗಳಿಂದ ಚೆನ್ನಾಗಿ ಪೂಜಿಸಿ ಪೂರ್ವಾಭಿಮುಖವಾಗಿರುವ ಗೋವಿನ ಬಾಲವನ್ನೂ ಕರುವಿನ ಬಾಲವನ್ನೂ ತುಪ್ಪದ ಪಾತ್ರೆಯಲ್ಲಿಟ್ಟು ಉತ್ತರಾಭಿಮುಖನಾದ ಬ್ರಾಹ್ಮಣನಿಗೆ ಎಳ್ಳುದರ್ಭೇಗಳೊಂದಿಗೆ ನೀರುಬಿಟ್ಟು ದಾನ ಮಾಡಬೇಕು. ಆಗ ಯಜ್ಞ ಸಾಧನಭೂತಾಯ ... ಎಂಬ ಶ್ಲೋಕವನ್ನು ಉಚ್ಚರಿಸಬೇಕು. ಯಜ್ಞಕ್ಕೆ ಸಾಧನ ಭೂತವಾದ ಸಕಲ ಪಾಪಗಳೂ ಪರಿಹಾರ ಮಾಡುವ ಈ ಗೋದಾನದಿಂದ ವಿಶ್ವರೂಪಧರನಾದ ಪರಮಾತ್ಮ ಪ್ರೀತನಾಗಲಿ ಎಂದು ಅದರರ್ಥ.

ಇನ್ನೊಂದು ಅರ್ಥದಲ್ಲಿ ಗೋದಾನವೆಂದರೆ ಗರ್ಭಾಧಾನಾದಿ ಷೋಡಶ ಸಂಸ್ಕಾರಗಳಲ್ಲೊಂದು. ಮಲ್ಲಿನಾಥನ ಹೇಳಿಕೆಯಂತೆ ಇಲ್ಲಿ ಗೋ ಎಂದರೆ ಕೂದಲು ಅದನ್ನು ಕತ್ತರಿಸುವದೇ ದಾನ. ಈ ಸಂಸ್ಕಾರವನ್ನು ಬ್ರಾಹ್ಮಣನಿಗೆ 16ನೆಯ ವರ್ಷಕ್ಕೂ ಕ್ಷತ್ರಿಯನಿಗೆ 22ನೆಯ ವರ್ಷಕ್ಕೂ ವೈಶ್ಯನಿಗೆ 24 ವರ್ಷಕ್ಕೂ ಮಾಡಬೇಕೆಂದೂ ಮನುಧರ್ಮಶಾಸ್ತ್ರದಲ್ಲಿದೆ. ಕಾಳೀದಾಸನ ರಘುವಂಶ ಮಹಾಕಾವ್ಯದಲ್ಲಿ ರಘುವಿಗೆ ದಿಲೀಪ ಗೋದಾನ ವಿಧಿಯ ಅನಂತರ ವಿವಾಹ ವಿಧಿಯನ್ನು ನೆರವೇರಿಸಿದನೆಂದಿದೆ. ಈ ಸಂಸ್ಕಾರಕ್ರಮದಲ್ಲಿ ಹೋಮಾದಿಗಳ ಅನಂತರ ಒಂದು ಹಸುವಿಗೆ ಗ್ರಾಸಕೊಟ್ಟು ತೃಪ್ತಿಪಡಿಸಿ ಗುರುಗಳಿಗೆ ಅದನ್ನು ದಾನವಾಗಿಕೊಡಬೇಕೆಂದೂ ಇದೆ. ಇದು ವೇದವ್ರತಗಳಲ್ಲೊಂದು.
(ಎನ್.ಆರ್.ಜಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ